User:Deehunk
Sri Prasanna Someshwara Temple, Magadi ಮಾಗಡಿ ಪಟ್ಟಣಕ್ಕೆ ಸುಮಾರು ಒಂದು ಕಿಮಿ ದೂರದಲ್ಲಿ ಎತ್ತರವಾದ ಪ್ರದೇಶದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಶ್ರೀ ಸೋಮೇಶ್ವರ ದೇವಾಲಯ ಸುಮಾರು 90 X 70 ಗಜ ವಿಸ್ತೀರ್ಣದ ಪ್ರಾಕಾರವನ್ನು ಹೊಂದಿದ್ದು ಇದರ ನಾಲ್ಕು ಮೂಲೆಗಳಲ್ಲಿ ಪುಟ್ಟ ಗೋಪುರಗಳಿವೆ. ದೇವಾಲಯದ ದಕ್ಷಿಣಕ್ಕಿರುವ ಹಲವು ಅಂತಸ್ತುಗಳಿಂದ ಕೂಡಿದ್ದ ಎತ್ತರದ ಗೋಪುರವು ಸುಮಾರು 100 ವರ್ಷಗಳಿಗೂ ಹಿಂದೆಯೇ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ಬಿದ್ದಿರುವುದಾಗಿ ಬಿ. ಎಲ್ ರೈಸ್ ರವರು ಎಪಿಗ್ರಾಫಿಯಾ ಕರ್ನಾಟಕದಲ್ಲಿ ಬರೆದಿರುತ್ತಾರೆ. ಅಂತೆಯೇ ಮುಂದಿನ (ಉತ್ತರ ದಿಕ್ಕಿನ) ಗೋಪುರವೂ ಸಹಾ ಸಿಡಿಲಿನ ಹೊಡೆತಕ್ಕೆ ಉರುಳಿಬಿದ್ದು, ನಂತರ ಮಾಗಡಿಯ ಶರಣೀಕ ಕೃಷ್ಣಮೂರ್ತಿಗಳ ಕಾಲದಲ್ಲಿ ಜೀರ್ಣೋದ್ದಾರ ಕಾರ್ಯ ನಡೆಯಿತೆಂದು ಹೇಳುತ್ತಾರೆ. ಈ ದೇವಾಲಯದ ಮುಂದಿರುವ ವಿಜಯನಗರದ ಶೈಲಿಯಂತಿರುವ ತೆರೆದ ಮುಖ ಮಂಟಪದ ಕಂಬವೊಂದರಲ್ಲಿ ಮುದ್ದಾದ ಗಣಪತಿಯ ಕೆತ್ತನೆಯನ್ನು ಕಾಣಬಹುದಾಗಿದೆ. ನವರಂಗದಲ್ಲಿರುವ ನಾಲ್ಕು ಕಂಬಗಳ ಮೇಲಿರುವ ಪ್ರಾಣಿ ಪಕ್ಷಿಗಳ, ದೇವ-ಮಾನವರ ಚಿತ್ರ ವಿಚಿತ್ರ ಕೆತ್ತನೆಗಳು ವೈಶಿಷ್ಟ್ಯಪೂರ್ಣವಾಗಿದ್ದು ಮನಸೂರೆಗೈಯುತ್ತವೆ. ಉತ್ತರಾಭಿಮುಖವಾಗಿರುವ ಈ ದೇವಾಲಯದಲ್ಲಿ ಸು. 3 ಅಡಿ ಎತ್ತರದ ಶ್ರೀ ಸ್ವಾಮಿಲಿಂಗಪೀಠ ನೇರಾ ಹಾಗೂ ಅರ್ಧಮಂಟಪದಲ್ಲಿ ಇರುವ ಬಸವ ಆಕರ್ಷಣೀಯವಾಗಿದೆ. ಸು. 2 ಅಡಿ ಎತ್ತರದ ಉತ್ಸವಮೂರ್ತಿ ಗಂಗೆ ಗೌರಿ ಇಬ್ಬರನ್ನೂ ಹೊಂದಿರುವುದೊಂದು ವಿಶೇಷ. ಗರ್ಭ ಗೃಹದಲ್ಲಿ ಹಿಂಬಾಗದ ಗೋಡೆಯಲ್ಲಿ 1512ಕ್ಕೆ ಸೇರಿದ ಶಿಲಾಶಾಸನವನ್ನುಕಾಣಬಹುದು. ಈ ದೇವಾಲಯದ ಎಡಭಾಗಕ್ಕೆ ಪ್ರತ್ಯೇಕವಾದ ದೇವಾಲಯದಲ್ಲಿ ಸುಮಾರು 5 ಅಡಿ ಎತ್ತರವಿರುವ ಅಮ್ಮನವರ ಮೂರ್ತಿ ಸುಂದರವಾಗಿದೆ. ಅದಕ್ಕೆ ಎದುರಾಗಿರುವ ದೇವಾಲಯದಲ್ಲಿ ಸುಮಾರು 4.75 ಅಡಿ ಎತ್ತರದ ಶ್ರೀ ಸತ್ಯನಾರಾಯಣಸ್ವಾಮಿಯ ಮೂರ್ತಿ ಆಕರ್ಷಕವಾಗಿದೆ. ದೇವಾಲಯದ ಎಡಭಾಗಕ್ಕೆ ಕೆಂಪೇಗೌಡರ ಹಜಾರವು, ಬಲಭಾಗಕ್ಕೆ ನೃತ್ಯ ಮಂಟಪವೂ ಇದೆ. ಈ ನೃತ್ಯ ಮಂಟಪದ ಎರಡು ಕಂಬಗಳಲ್ಲಿ ಸುಮಾರು 1.25 ಅಡಿ ಎತ್ತರದ 2 ಕೆತ್ತನೆಗಳಿದ್ದು ಅವು ಕೆಂಪೇಗೌಡರದ್ದೆಂದು ಹೇಳಲಾಗುತ್ತದೆ. ಇಲ್ಲಿನ ಮಂಟಪಗಳ ಮೇಲ್ಛಾವಣಿಯಲ್ಲಿ ಸುಂದರ ಆಕರ್ಷಕ ಬಣ್ಣದ ಚಿತ್ರಗಳು ಕಂಡುಬರುತ್ತವೆ. ಆದರೆ ಅವೆಲ್ಲವೂ ಈಗಾಗಲೇ ಬಹಳಷ್ಟು ಮಾಸಿದೆ. ದೇವಾಲಯದ ಹಿಂಭಾಗಕ್ಕೆ ಅಣತಿ ದೂರದಲ್ಲಿ ದೊಡ್ಡ ಬಂಡೆಯ ಮೇಲೆ ಸುಂದರವಾದ ಬಸವಣ್ಣನ ಪ್ರತಿಮೆಯಿದ್ದು, ಅದನ್ನು "ಶಿಖರ ಬಸವ" ಎಂದು ಕರೆಯುತ್ತಾರೆ. ಶ್ರೀ ಸೋಮೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಪ್ರತಿ ವರ್ಷ ಮಾಘ ಶುದ್ದ ಸಪ್ತಮಿಯಂದು ವೈಭವೋವಿತವಾಗಿ ನಡೆಯುತ್ತಿದ್ದು ಈ ಸಂಧರ್ಭದಲ್ಲಿ ಪಾನಕಪೂಜೆ, ಅನ್ನಸಂತರ್ಪಣೆಗಳು ನಡೆಯುತ್ತವೆ.